ಮ್ಯಾಜಿಸ್ಟ್ರೇಟರ ಅಧಿಕಾರ ವ್ಯಾಪ್ತಿ.
ಈ ಅಧಿನಿಯಮದ ಅಡಿಯಲ್ಲಿ ಅಥವಾ ಅದರ ಮೇರೆಗೆ ರಚಿಸಿದ ಯಾವುದೇ ನಿಯಮ, ವಿನಿಯಮ ಅಥವಾ ಉಪವಿಧಿಯ ಅಡಿಯಲ್ಲಿ ಯಾವುದೇ ಪ್ರಾಸಿಕ್ಯೂಷನನ್ನು, ಅದರಲ್ಲಿ ಅನ್ಯಥಾ ಉಪಬಂಧಿಸಿದ್ದ ಹೊರತು, ಯಾವನೇ ಮ್ಯಾಜಿಸ್ಟೇಟರ ಮುಂದೆ ಹೂಡಬಹುದು ಮತ್ತು ಈ ಅಧಿನಿಯಮ ಅಥವಾ ಅದರ ಅಡಿಯಲ್ಲಿ ರಚಿಸಿದ ಯಾವುದೇ ನಿಯಮ, ವಿನಿಯಮ ಅಥವಾ ಉಪ ವಿಧಿಯ ಮೇರೆಗೆ ಅಥವಾ ಅವುಗಳಿಂದಾಗಿ ವಿಧಿಸಿದ ಪ್ರತಿಯೊಂದು ಜುಲ್ಮಾನೆ ಅಥವಾ ದಂಡವನ್ನು ಮತ್ತು ಯಾವುದರ ವಸೂಲಿಗಾಗಿ ಈ ಅಧಿನಿಯಮದಲ್ಲಿ ಅನ್ಯಥಾ ವಿಶೇಷ ವ್ಯವಸ್ಥೆಯನ್ನು ಮಾಡಿಲ್ಲವೋ ಆ ನಷ್ಟ ಪರಿಹಾರ ಅಥವಾ ಇತರ ವೆಚ್ಚಗಳ ಎಲ್ಲಾ ಕ್ಲೇಮುಗಳನ್ನೂ ಸಹ, ಅಂಥ ಮ್ಯಾಜಿಸ್ಟ್ರೇಟರಿಗೆ, ಅರ್ಜಿಯನ್ನು ಸಲ್ಲಿಸಿದ ಮೇಲೆ, ಯಾರಿಂದ ಹಣವನ್ನು ಕ್ಲೇಮು ಮಾಡಲಾಗಿದೆಯೋ ಆ ವ್ಯಕ್ತಿಗೆ ಸೇರಿದ, ತನ್ನ ಅಧಿಕಾರ ವ್ಯಾಪ್ತಿಯ ಪರಿಮಿತಿಯೊಳಗಿನ ಯಾವುದೇ ಚರ ಸ್ವತ್ತಿನ ಜಫ್ತಿ ಮತ್ತು ಮಾರಾಟದ ಮೂಲಕ ವಸೂಲು ಮಾಡಬಹುದು.
2[1[296ಎ. ಕುಂದು ಕೊರತೆ ನಿವಾರಣಾ ಪ್ರಾಧಿಕಾರ.- (1) ರಾಜ್ಯ ಸರ್ಕಾರವು, ರಾಜ್ಯ ಪತ್ರದಲ್ಲಿ ಅಧಿಸೂಚನೆಯ ಮೂಲಕ ಪ್ರತಿಯೊಂದು ಜಿಲ್ಲೆಯಲ್ಲಿ, ನಿವೃತ್ತ ಜಿಲ್ಲಾ ನ್ಯಾಯಾಧೀಶ ಅಥವಾ ವಿಶೇಷ ಡೆಪ್ಯೂಟಿ ಕಮೀಷನರ್ ದರ್ಜೆಗೆ ಕಡಿಮೆಯಿಲ್ಲದ ದರ್ಜೆಯ 3[ನಿವೃತ್ತ]3 ಅಧಿಕಾರಿಯನ್ನು ಒಳಗೊಂಡ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯನ್ನಾಗಿ ನೇಮಿಸತಕ್ಕದ್ದು.
(2) ರಾಜ್ಯ ಸರ್ಕಾರವು ಕುಂದುಕೊರತೆ ನಿವಾರಣಾ ಪ್ರಾಧಿಕಾರಿಗೆ ಅವಶ್ಯಕ ಸಿಬ್ಬಂದಿಯನ್ನು ಒದಗಿಸತಕ್ಕದ್ದು.
(3) ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ಕಛೇರಿಯು ವಾರದ ಎಲ್ಲಾ ಕೆಲಸದ ದಿನಗಳಂದು ಪಂಚಾಯತ್ನ ವ್ಯವಹಾರ ವೇಳೆಗಳಲ್ಲಿ ತೆರೆದಿರತಕ್ಕದ್ದು.
(4) ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ಸಂಬಳ ಮತ್ತು ಇತರ ಭತ್ಯೆಗಳು, ಆತನ ನಿವೃತ್ತಿ ಮುಂಚೆ ಅತನು ಅರ್ಹನಾದುದಕ್ಕೆ ನಿವೃತ್ತಿ ವೇತನವನ್ನು ಕಳೆದು, ಆಗಿರತಕ್ಕದ್ದು.
(5) ಕುಂದು ಕೊರತೆ ನಿವಾರಣಾ ಪ್ರಾಧಿಕಾರವು, ನಿಯಮಿಸಬಹುದಾದ ಅಂಥ ಅವಧಿಯೊಳಗೆ ಬಾಧಿತ ನಾಗರಿಕರಿಗೆ ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ನಿರ್ಧಾರವನ್ನು ತಿಳಿಸತಕ್ಕದ್ದು.
(6) ಕುಂದು ಕೊರತೆ ನಿವಾರಣಾ ಪ್ರಾಧಿಕಾರವು, ಜಿಲ್ಲಾ ಕುಂದು ಕೊರತೆ ನಿವಾರಣಾ ಪ್ರಾಧಿಕಾರಿಯ ನಿರ್ಧಾರವನ್ನು ತಿಳಿಸುವುದಕ್ಕಾಗಿ ನಿಯಮಿಸಲಾದ ಅವಧಿಯ ಮುಕ್ತಾಯವಾದ ತರುವಾಯ ತಕ್ಷಣವೇ, ದೂರುದಾರರ ವಿವರಗಳು ದೂರಿನ ಸ್ವರೂಪ ಮತ್ತು ಪರಿಹಾರ ನೀಡದಿರುವುದಕ್ಕೆ ಕಾರಣಗಳೊಂದಿಗೆ ಪರಿಹಾರ ನೀಡದ ಪ್ರತಿಯೊಂದು ದೂರನ್ನು,-
ಗ್ರಾಮ ಪಂಚಾಯತಿ ಮತ್ತು ತಾಲೂಕು ಪಂಚಾಯಿತಿಯ ಸಂದರ್ಭದಲ್ಲಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ; ಮತ್ತು
ಜಿಲ್ಲಾ ಪಂಚಾಯಿತಿಯ ಸಂದರ್ಭದಲ್ಲಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ,
- ಇವರಿಗೆ ಅವಶ್ಯಕ ಕ್ರಮಕ್ಕಾಗಿ ವರದಿ ಮಾಡತಕ್ಕದ್ದು.
(7) ಕುಂದು ಕೊರತೆ ನಿವಾರಣಾ ಪ್ರಾಧಿಕಾರವು, ಯಾವುದೇ ದೂರನ್ನು ನಿರ್ಧರಿಸುವ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿ ಅಥವಾ ಅಧಿಕಾರಿಗಳ ಅಥವಾ ಯಾವುದೇ ಇತರ ವ್ಯಕ್ತಿಯು, ಯಾವುದೇ ಯುಕ್ತ ಕಾರಣವಿಲ್ಲದೆ, ಈ ಅಧಿನಿಯಮದ ಅಡಿಯಲ್ಲಿ ಆತನು ನಿರ್ವಹಿಸಬೇಕಾದ ಆತನ ಕರ್ತವ್ಯಗಳನ್ನು ಬೇಕಾಗಿಯೇ ಕಡೆಗಣಿಸಿರುವನು ಅಥವಾ ನಿರಾಕರಿಸಿರುವನೆಂದು ಅಥವಾ ವಿಫಲನಾಗಿರುವನು ಅಥವಾ ನಿಗದಿತ ಸಮಯದೊಳಗೆ ನೀಡಬೇಕಾದ ಸೇವೆಯನ್ನು ವಿಸ್ತರಿಸುವುದಕ್ಕೆ ದುರ್ಭಾವನೆಯಿಂದ ಅಲ್ಲಗಳೆದಿದ್ದಾನೆಂದು ಅಭಿಪ್ರಾಯಪಟ್ಟಲ್ಲಿ, ಅಂಥ ಅಧಿಕಾರಿಯನ್ನು ಅಥವಾ ವ್ಯಕ್ತಿಯನ್ನು ಕುಂದು ಕೊರತೆ ಪರಿಹಾರವಾಗುವವರೆಗೆ ಪ್ರತಿ ದಿನಕ್ಕೆ ಎರಡು ನೂರ ಐವತ್ತು ರೂಪಾಯಿಗಳ ದಂಡಕ್ಕೆ ಒಳಪಡಿಸತಕ್ಕದ್ದು. ಆದಾಗ್ಯೂ ಅಂಥ ದಂಡದ ಒಟ್ಟು ಮೊತ್ತವು ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ಮೀರತಕ್ಕದ್ದಲ್ಲ. ಕುಂದುಕೊರತೆ ಪ್ರಾಧಿಕಾರವು ದಂಡದ ಸ್ಥಾನದಲ್ಲಿ ಸಂಬಂಧಪಟ್ಟ ಅಧಿಕಾರಿ ಅಥವಾ ವ್ಯಕ್ತಿಯ ವಿರುದ್ದ ಸೇವಾ ನಿಯಮಗಳ ಅಥವಾ ಆತನಿಗೆ ಅನ್ವಯವಾಗುವ ಸಂಬಂಧಿಸಿದ ಕಾನೂನಿನ ಅಡಿಯಲ್ಲಿ ಶಿಸ್ತಿನ ಕ್ರಮವನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡಬಹುದು: ಪರಂತು, ಸಂಬಂಧಪಟ್ಟ ಅಧಿಕಾರಿ ಅಥವಾ ವ್ಯಕ್ತಿಗೆ ಆತನ ಮೇಲೆ ಯಾವುದೇ ದಂಡವನ್ನು ವಿಧಿಸುವ ಪೂರ್ವದಲ್ಲಿ ತನ್ನ ಅಹವಾಲನ್ನು ಹೇಳಿಕೊಳ್ಳಲು ಯುಕ್ತ ಅವಕಾಶವನ್ನು ನೀಡತಕ್ಕದ್ದು:
ಮತ್ತು ಪರಂತು, ಆತನು ಯುಕ್ತವಾಗಿ ಮತ್ತು ಶ್ರದ್ಧಾಪೂರ್ವಕವಾಗಿ ಹಾಗೇ ಮಾಡಿದ್ದಾನೆಂದು ರುಜುವಾತು ಪಡಿಸುವ ಹೊಣೆಯು ನೀಡಬೇಕಾದ ಸೇವೆಯನ್ನು ನೀಡಲು ನಿರಾಕರಣೆ ಮಾಡಿರುವ ಅಧಿಕಾರಿ ಅಥವಾ ವ್ಯಕ್ತಿಯದ್ದಾಗಿರತಕ್ಕದ್ದು.
ವಿವರಣೆ: ಈ ಪ್ರಕರಣದ ಉದ್ದೇಶಕ್ಕಾಗಿ:-
(ಎ) ಬಾಧಿತ ವ್ಯಕ್ತಿ ಎಂದರೆ ಈ ಅಧಿನಿಯಮದ ಅಥವಾ ಯಾವುದೇ ಇತರ ಕಾನೂನಿನ ಅಡಿಯಲ್ಲಿ ಆತನು ಅನುಭವಿಸಬೇಕಾದ ಸೇವೆಯನ್ನು ನೀಡುವಲ್ಲಿ ಗ್ರಾಮ ಪಂಚಾಯಿತಿ, ತಾಲೂಕ ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಯಾವುದನ್ನಾದರೂ ಮಾಡಬೇಕಾದ್ದರಿಂದ ಅಥವಾ ಬಿಟ್ಟು ಬಿಡುವುದರಿಂದ ಬಾಧಿತನಾದ ಒಬ್ಬ ನಾಗರಿಕ ಮತ್ತು ಪಂಚಾಯಿತಿನ ಮೂಲಕ ಸರ್ಕಾರವು ನೀಡುವ ಯಾವುದೇ ಸ್ಕೀಮಿನ ಪ್ರಯೋಜನವನ್ನು ಕೋರುವ ವ್ಯಕ್ತಿಯನ್ನು ಒಳಗೊಳ್ಳುತ್ತದೆ ;
(ಬಿ) ಕುಂದು ಕೊರತೆ ಎಂದರೆ :-
ನೀರು ಸರಬರಾಜು ;
ಆರೋಗ್ಯ ನಿರ್ವಹಣೆ ;
ರಸ್ತೆ ನಿರ್ವಹಣೆ ;
ಬೀದಿ ದೀಪಗಳ ನಿರ್ವಹಣೆ ;
ಯಾವುದೇ ಸ್ಕೀಮ್ ಅಥವಾ ಯೋಜನೆಯ ಫಲಾನುಭವಿಗಳನ್ನು ಗುರುತಿಸುವುದು;
ಯಾವುದೇ ಸ್ಕೀಮಿನ ಅಥವಾ ಯೋಜನೆಯ ಪ್ರಯೋಜನದ ಹಂಚಿಕೆ;
ನೈರ್ಮಲೀಕರಣ ನಿರ್ವಹಣೆ ;
ಯಾವುದೇ ದಸ್ತಾವೇಜುಗಳು ಅಥವಾ ಪ್ರಮಾಣಪತ್ರವನ್ನು ಮಂಜೂರು ಮಾಡುವುದು ಅಥವಾ ಹೊರಡಿಸುವುದು
ನಿಯಮಿಸಬಹುದಾದ ಯಾವುದೇ ಇತರ ವಿಷಯ,- - ಇವುಗಳ ಸಂಬಂಧದಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ತೆಗೆದುಕೊಳ್ಳುವ ಕ್ರಿಯೆಯನ್ನು ಮಾಡುವುದರಿಂದ ಅಥವಾ ಬಿಟ್ಟುಬಿಡುವುದರ ಕುರಿತು ಬಾಧಿತ ನಾಗರಿಕನು ನೀಡುವ ಯಾವುದೇ ದೂರನ್ನು ಇದು ಒಳಗೊಳ್ಳುತ್ತದೆ.]1]2
1. 2011ರ ಅಧಿನಿಯಮ ಸಂಖ್ಯೆ: 34ರ ಮೂಲಕ ದಿನಾಂಕ: 04-10-2010ರಿಂದ ಸೇರಿಸಲಾಗಿದೆ.
2. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
3. 2017ರ ಅಧಿನಿಯಮ ಸಂಖ್ಯೆ 37ರ ಮೂಲಕ ದಿನಾಂಕ 11.07.2017ರಿಂದ ಸೇರಿಸಲಾಗಿದೆ
2[1[296ಬಿ. ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ಅಧಿಕಾರಗಳು ಮತ್ತು ಕರ್ತವ್ಯಗಳು.- (1) ಕುಂದು ಕೊರತೆ ನಿವಾರಣಾ ಪ್ರಾಧಿಕಾರವು ;- (ಎ) ಬಾಧಿತ ವ್ಯಕ್ತಿಯ ಕುಂದು ಕೊರತೆಯನ್ನು ಪರಿಹರಿಸುವುದಕ್ಕೆ ಆತನು ಅವಶ್ಯವೆಂದು ಭಾವಿಸುವ ಯಾವುದೇ ದಸ್ತಾವೇಜನ್ನು ಕೇಳಬಹುದು ಮತ್ತು ಪರಿಶೀಲಿಸಬಹುದು.
(ಬಿ) ಕುಂದು ಕೊರತೆ ನಿವಾರಣಾ ಪ್ರಾಧಿಕಾರವು, ಈ ಅಧಿನಿಯಮದ ಅಡಿಯಲ್ಲಿ ಪ್ರಕಾರ್ಯಗಳನ್ನು ನಿರ್ವಹಿಸುವ ಉದ್ದೇಶಗಳಾಗಿ, ಈ ಮುಂದಿನ ವಿಷಯಗಳ ಸಂಬಂಧದಲ್ಲಿ ಸಿವಿಲ್ ಪ್ರಕ್ರಿಯಾ ಸಂಹಿತೆ 1908ರ, ಅಡಿಯಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ನಿಹಿತವಾದಂಥದೇ ಅಧಿಕಾರಗಳನ್ನು ಹೊಂದಿರತಕ್ಕದ್ದು, ಎಂದರೆ:-
ಯಾವುದೇ ವ್ಯಕ್ತಿಯ ಹಾಜರಾತಿಯನ್ನು ಸಮನು ಮಾಡುವುದು ಮತ್ತು ಒತ್ತಾಯಪಡಿಸುವುದು ಹಾಗೂ ಪ್ರಮಾಣದ ಮೇಲೆ ಆತನನ್ನು ಪರೀಕ್ಷಿಸುವುದು;
ಸಾಕ್ಷ್ಯವಾಗಿ ನೀಡುವ ಯಾವುದೇ ದಸ್ತಾವೇಜು ಅಥವಾ ಇತರ ಭೌತಿಕ ವಸ್ತುವನ್ನು ಹುಡುಕುವುದು ಮತ್ತು ಒದಗಿಸುವುದು;
ಅಫಿಡವಿಟ್ಟುಗಳ ಮೇಲೆ ಸಾಕ್ಷ್ಯವನ್ನು ಸ್ವೀಕರಿಸುವುದು;
ಯಾವುದೇ ಸಾರ್ವಜನಿಕ ದಾಖಲೆಗಳನ್ನು ಅಗತ್ಯಪಡಿಸುವುದು;
ಸಾಕ್ಷಿಗಳ ಪರೀಕ್ಷೆಗಾಗಿ ಕಮೀಷನ್ ಗಳನ್ನು ಹೊರಡಿಸುವುದು;
ತನ್ನ ನಿರ್ಧಾರಗಳು, ನಿರ್ದೆಶನಗಳು ಮತ್ತು ಆದೇಶಗಳನ್ನು ಪುನರಾವಲೋಕಿಸುವುದು;
ನಿಯಮಿಸಬಹುದಾದ ಅಂಥ ಇತರ ವಿಷಯ.
(2) ಕುಂದು ಕೊರತೆ ನಿವಾರಣಾ ಪ್ರಾಧಿಕಾರವು ಅರೆ ನ್ಯಾಯಿಕ ಪ್ರಾಧಿಕಾರವಾಗಿದ್ದು ತನ್ನ ಮುಂದಿನ ವಿಷಯಗಳನ್ನು ಕ್ಷಿಪ್ರವಾಗಿ ವಿಲೇ ಮಾಡತಕ್ಕದ್ದು.
(3) ಒಂದು ಕಛೇರಿ ಅಥವಾ ಅಧಿಕಾರಿ ಅಥವಾ ಸಿಬ್ಬಂದಿಯ ನ್ಯೂನತೆ ನಿರ್ಲಕ್ಷ್ಯ ಅಥವಾ ದುಷ್ಕೃತ್ಯದ ಪರಿಣಾಮವಾಗಿ ಆಗಿರುವ ಕುಂದು ಕೊರತೆಯನ್ನು ಅಥವಾ ನಿರ್ದಿಷ್ಟ ಆಕ್ರಮಗಳು ಅಥವಾ ಫಲಾನುಭವಕ್ಕೆ ಪರಿಣಾಮ ಉಂಟು ಮಾಡುವ ಭೌತಿಕ ಪ್ರಯೋಜನ ಅಥವಾ ಬೇಧ-ಭಾವವನ್ನು ಸೂಚಿಸುವ ನಿರ್ಧಿಷ್ಟ ಪ್ರಕರಣವನ್ನು ಹೊರತುಪಡಿಸಿ ಬಾಧಿತ ನಾಗರಿಕನ ಯಾವುದೇ ದೂರನ್ನು ಕುಂದು ಕೊರತೆ ನಿವಾರಣಾ ಪ್ರಾಧಿಕಾರವು ಪುರಸ್ಕರಿಸತಕ್ಕದ್ದಲ್ಲ.
(4) ಕುಂದು ಕೊರತೆ ನಿವಾರಣಾ ಪ್ರಾಧಿಕಾರವು ಈ ಮುಂದಿನದನ್ನು ಖಚಿತಪಡಿಸಿಕೊಳ್ಳತಕ್ಕದ್ದು, ಎಂದರೆ:-
(ಎ) ದೂರನ್ನು ಸ್ವೀಕರಿಸಿದ ದಿನಾಂಕದಿಂದ ತೊಂಬತ್ತು ದಿನಗಳು ಮೀರದ ಸಮಯದ ಚೌಕಟ್ಟಿನಲ್ಲಿ ತೊಂದರೆಯನ್ನು ಪರಿಹರಿಸಲಾಗಿದೆ ; ಅಥವಾ
(ಬಿ) ತೊಂದರೆಯು ಆಗಿರುವ ಕಾರಣವನ್ನು ಗುರುತಿಸುವುದು ಮತ್ತು ತಪ್ಪಿತಸ್ಥ ಅಧಿಕಾರಿ ಅಥವಾ ವ್ಯಕ್ತಿಗಳಿಗೆ ಜವಾಬ್ದಾರಿಯನ್ನು ಹೊರಿಸುವುದು ಮತ್ತು (ಎ) ಖಂಡದಲ್ಲಿ ನಿರ್ದಿಷ್ಟಪಡಿಸಿದ ಅವಧಿಯ ತರುವಾಯ ಒಂದು ತಿಂಗಳೊಳಗೆ ಕುಂದುಕೊರತೆಯನ್ನು ಸಮಾಧಾನಕರವಾಗಿ ಪರಿಹರಿಸಲಾಗಿದೆ ; ಅಥವಾ
(ಸಿ) ಅಧಿಕಾರಿ ಅಥವಾ ವ್ಯಕ್ತಿಯ ಅಸಮರ್ಥತೆ, ನಿರ್ಲಕ್ಷ್ಯ ಅಥವಾ ದುಷ್ಕೃತ್ಯದ ಪರಿಣಾಮವಾಗಿ ತೊಂದರೆಯಾಗಿದ್ದಲ್ಲಿ ಕ್ರಮವನ್ನು ನಡತೆ ನಿಯಮಗಳು ಮತ್ತು ಇಲಾಖಾ ಪ್ರಕ್ರಿಯೆಗಳ ಅನುಸಾರವಾಗಿ ನಡೆಸಲಾಗಿದೆ ; ಅಥವಾ
(ಡಿ) ಸರಕುಗಳ ಮತ್ತು ಸೇವೆಗಳನ್ನು ನೀಡಲು ಜವಾಬ್ದಾರನಾದ ವ್ಯಕ್ತಿಯು ಬೇಕಾಗಿಯೇ ಸರಕು ಅಥವಾ ಸೇವೆಯನ್ನು ಒದಗಿಸಲು ನಿರ್ಲಕ್ಷಿಸಿರುವ ಅಥವಾ ಬ್ರಷ್ಠಾಚಾರ ತಡೆಗಟ್ಟುವ ಅಧಿನಿಯಮ 1988 ರ ಅಡಿಯಲ್ಲಿ ಪ್ರಕರಣದ ಮೇಲ್ನೋಟದಲ್ಲೇ ಆಧಾರಗಳು ಇದ್ದಾಗ ಆ ಮಟ್ಟಿಗೆ ವಿಧಿಸಬೇಕಾದ ದಂಡದ ಶಿಫಾರಸ್ಸಿನೊಂದಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಸಂದರ್ಭಾನುಸಾರವಾಗಿ ಸರ್ಕಾರದ ಕಾರ್ಯದರ್ಶಿಗೆ ಆತನು ಅವಲೋಕನೆಯನ್ನು ಮಾಡುವುದು.
(5) ಕುಂದು ಕೊರತೆ ನಿವಾರಣಾ ಪ್ರಾಧಿಕಾರವು ತನ್ನ ಕರ್ತವ್ಯಗಳ ಕ್ರಮಬದ್ಧ ನಿರ್ವಹಣೆಗಾಗಿ ಅಗತ್ಯವಾದ ಯಾವುದೇ ಇತರ ಅಧಿಕಾರಿಯ ನೆರವನ್ನು ಕೋರಬಹುದು ಅಥವಾ ಬಾಧಿತ ನಾಗರಿಕನು ಮಾಡಿದ ದೂರಿನ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಯಾವುದೇ ಇತರ ಅಧಿಕಾರಿಗೆ ನಿರ್ದೆಶಿಸಬಹುದು.
(6) (5)ನೇ ಉಪಪ್ರಕರಣದ ಅಡಿಯಲ್ಲಿ ನೆರವನ್ನು ಕೋರಲಾದ ಯಾವೊಬ್ಬ ಅಧಿಕಾರಿಯು ಕುಂದುಕೊರತೆ ನಿವಾರಣಾ ಪ್ರಾಧಿಕಾರಕ್ಕೆ ಎಲ್ಲಾ ನೆರವನ್ನು ನೀಡತಕ್ಕದ್ದು.]1]2
1. 2011ರ ಅಧಿನಿಯಮ ಸಂಖ್ಯೆ: 34ರ ಮೂಲಕ ದಿನಾಂಕ: 04-10-2010ರಿಂದ ಸೇರಿಸಲಾಗಿದೆ.
2. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
2[1[296ಸಿ. ಅಪೀಲು.- (1) ಕುಂದು ಕೊರತೆ ನಿವಾರಣಾ ಪ್ರಾಧಿಕಾರದ ನಿರ್ಧಾರದಿಂದ ಬಾಧಿತನಾದ ಅಥವಾ ಆತನು ದಾಖಲ್ಮಾಡಿದ ದೂರಿನ ಸಂಬಂಧದಲ್ಲಿ ತೆಗೆದುಕೊಂಡ ಕ್ರಮದ ವರದಿಯನ್ನು ಸ್ವೀಕರಿಸಿದ ಯಾವೊಬ್ಬ ವ್ಯಕ್ತಿಯು, ಅಂಥ ತೀರ್ಮಾನದ ಸ್ವೀಕೃತಿಯ ಮುಕ್ತಾಯದಿಂದ ಮೂವತ್ತು ದಿನಗಳ ಒಳಗಾಗಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಸಂದರ್ಭಕ್ಕನುಸಾರವಾಗಿ ಸರ್ಕಾರದ ಕಾರ್ಯದರ್ಶಿಗೆ ಅಪೀಲನ್ನು ಸಲ್ಲಿಸಬಹುದು ಮತ್ತು ಅಂಥ ಅಪೀಲು ಪ್ರಾಧಿಕಾರದ ತೀರ್ಮಾನವು ಅಂತಿಮವಾಗಿರತಕ್ಕದ್ದು :
ಪರಂತು ಅಪೀಲು ಪ್ರಾಧಿಕಾರವು, ಒಂದು ವೇಳೆ ದೂರುದಾರನು ಸಮಯದೊಳಗೆ ಅಪೀಲನ್ನು ದಾಖಲು ಮಾಡದೇ ಇರಲು ಸಾಕಷ್ಟು ಕಾರಣಗಳು ದೂರುದಾರರನ್ನು ನಿರ್ಬಂಧಿಸಿದೆ ಎಂದು ಮನಗಂಡರೆ, ಮೂವತ್ತು ದಿನಗಳ ತರುವಾಯವೂ ಅಪೀಲನ್ನು ಸ್ವೀಕರಿಸಬಹುದು
(2) ಪ್ರತಿಯೊಂದು ಅಪೀಲನ್ನು ಅಂಥ ಅಪೀಲನ್ನು ಸ್ವೀಕರಿಸಿದ ದಿನಾಂಕದಿಂದ ತೊಂಬತ್ತು ದಿನಗಳೊಳಗೆ ವಿಲೆ ಮಾಡತಕ್ಕದ್ದು.
(3) ಅಪೀಲು ಪ್ರಾಧಿಕಾರವು, ತಾನು ತೆಗೆದುಕೊಂಡ ತೀರ್ಮಾನಗಳ ದಿನಾಂಕದಿಂದ ಹದಿನೈದು ಕೆಲಸದ ದಿನಗಳ ಅವಧಿಯೊಳಗೆ ಸಂಬಂಧಪಟ್ಟ ಪಕ್ಷಕಾರರಿಗೆ ತೀರ್ಮಾನಗಳ ಪ್ರತಿಯನ್ನು ತಲುಪಿಸುವ ವ್ಯವಸ್ಥೆ ಮಾಡತಕ್ಕದ್ದು]1]2
1. 2011ರ ಅಧಿನಿಯಮ ಸಂಖ್ಯೆ: 34ರ ಮೂಲಕ ದಿನಾಂಕ: 04-10-2010ರಿಂದ ಸೇರಿಸಲಾಗಿದೆ.
2. 2015ರ ಅಧಿನಿಯಮ ಸಂಖ್ಯೆ 44ರ ಮೂಲಕ ದಿನಾಂಕ: 25.02.2016ರಿಂದ ಪ್ರತಿಯೋಜಿಸಲಾಗಿದೆ.
No comments:
Post a Comment