ರಸ್ತೆ ಸುರಕ್ಷತೆ
ನಿತ್ಯ ಜೀವನದಲ್ಲಿ ರಸ್ತೆ ಸಂಚಾರವೂ ಒಂದು ಭಾಗ. ರಸ್ತೆ ಸಂಚಾರವು ವಾಹನ ಚಾಲಕರನ್ನಷ್ಟೇ ಅಲ್ಲದೇ ಪ್ರಯಾಣಿಕರು ಹಾಗೂ ಪಾದಚಾರಿಗಳನ್ನೂ ಒಳಗೊಂಡಿರುತ್ತದೆ. ಒಮ್ಮೊಮ್ಮೆ ಕ್ಷಣ ಮಾತ್ರದಲ್ಲಿ ಅಪಘಾತಗಳು ನಡೆದು ಹೋಗುತ್ತವೆ. ಆದರೆ ಅಪಘಾತಗಳ ಭೀಕರ ಪರಿಣಾಮಗಳನ್ನು ಜೀವನ ಪರ್ಯಂತ ಸಂಚಾರ ಮಾಡುವವರು ಮತ್ತು ಅವಲಂಬಿತರೂ ಅನುಭವಿಸಬೇಕಾಗುತ್ತದೆ. ಪಾದಚಾರಿ ಮತ್ತು ವಾಹನ ಚಾಲಕರ
ನಿರ್ಲಕ್ಷ್ಯತೆ, ಮೊಬೈಲ್ ಬಳಕೆ, ಅವಸರ, ಅತಿವೇಗ, ಟ್ರಾಫಿಕ್ ಸಿಗ್ನಲ್ ಜಂಪ್ ಮಾಡುವುದು, ವಿರುದ್ಧ ದಿಕ್ಕಿನಲ್ಲಿ ಚಲಿಸುವುದು, ಇಯರ್ ಫೋನ್ ಬಳಸುತ್ತಾ ಸಾಗುವುದು, ರಸ್ತೆ ನಿಯಮಗಳ ಅರಿವಿಲ್ಲದಿರುವುದು, ಮದ್ಯಪಾನ ಮತ್ತು ಕಳಪೆ ಗುಣಮಟ್ಟದ ರಸ್ತೆಗಳು ಹಾಗೂ ಅವುಗಳ ನಿರ್ವಹಣೆ ಮುಂತಾದವು ಅಪಘಾತಗಳಿಗೆ ಕಾರಣವಾಗುತ್ತವೆ.
ಭಾರತದ ರಸ್ತೆಗಳು ಈಗಾಗಲೇ ಅಪಘಾತದ ಎಚ್ಚರಿಕೆಯ ಘಂಟೆಯನ್ನು ಬಾರಿಸುತ್ತಿವೆ. ಒಂದು ಸಮೀಕ್ಷೆಯ ಅಂದಾಜಿನ ಪ್ರಕಾರ ಭಾರತದ ರಸ್ತೆಗಳಲ್ಲಿ ಪ್ರತಿ ವರ್ಷ 3 ಲಕ್ಷ ಅಪಘಾತಗಳು ಸಂಭವಿಸುತ್ತವೆ. 80 ಸಾವಿರಕ್ಕಿಂತಲೂ ಹೆಚ್ಚು ಜನರು ಮರಣವನ್ನಪ್ಪುತ್ತಿದ್ದಾರೆ. ಅಷ್ಟೇ ಅಲ್ಲದೆ 3,600 ಕೋಟಿ ರೂಪಾಯಿಗಳ ನಷ್ಟವಾಗುತ್ತಿದೆ. ನಮ್ಮ ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲಿ ಆಗಿರುವ ಅಪಘಾತದ ಅಂಕಿಅಂಶಗಳ ಸರಾಸರಿಯನ್ನು ಗಮನಿಸಿದಾಗ, ಪ್ರತಿ ವರ್ಷ 44449 ಅಪಘಾತಗಳು ಸಂಭವಿಸಿವೆ. 52 ಸಾವಿರಕ್ಕಿಂತಲೂ ಹೆಚ್ಚು ಜನರು ಗಾಯಗೊಂಡಿದ್ದು, 9 ಸಾವಿರಕ್ಕಿಂತಲೂ ಹೆಚ್ಚು ಜನರು ಮರಣವನ್ನಪ್ಪಿದ್ದಾರೆ. ವಿಸ್ಮಯ ಎಂದರೆ ದೇಶದಲ್ಲಿ ಸಂಭವಿಸುವ ಅಪಘಾತಗಳಲ್ಲಿ ಶೇ.65 ರಷ್ಟು ಅಪಘಾತಗಳು ವಾಹನ ಸವಾರರ ಮತ್ತು ಪಾದಚಾರಿಗಳ ನಿರ್ಲಕ್ಷ್ಯ ಹಾಗೂ ಸಂಚಾರ ನಿಯಮಗಳ ಉಲ್ಲಂಘನೆಯಿಂದಲೇ ಸಂಭವಿಸುತ್ತಿವೆ. ರಸ್ತೆ ಸುರಕ್ಷತೆಯ ನಿಯಮಗಳು ಕೇವಲ ಕಾನೂನಿಗಾಗಿ ಅಲ್ಲ: ಬದಲಾಗಿ ಪ್ರತಿಯೊಬ್ಬ ನಾಗರಿಕರ ಮತ್ತು ಪ್ರತಿ ಜೀವಿಗಳ ಸುರಕ್ಷತೆಗಾಗಿ ಮಾತ್ರ ರೂಪಿಸಲ್ಪಟ್ಟಿವೆ.
ರಸ್ತೆ ಅಪಘಾತದಲ್ಲಿ ಕೇವಲ ಮನುಷ್ಯರು ಮಾತ್ರವಲ್ಲ ಲಕ್ಷಾಂತರ ಪ್ರಾಣಿಗಳೂ ಸಹ ಬಲಿಯಾಗುತ್ತಿರುವುದು ದುರಂತಮಯ. ಇಂತಹ ವನ್ಯ ಜೀವಿಗಳ ಪ್ರಾಣವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಜವಾಬ್ದಾರಿಯುತ ನಾಗರಿಕರಾದ ನಾವು ಸಂಚಾರ ನಿಯಮಗಳನ್ನು ಪಾಲಿಸಿ, ರಸ್ತೆ ಸುರಕ್ಷತೆಗೆ ಹೆಚ್ಚಿನ ಗಮನ ನೀಡಬೇಕಿದೆ. ಸುರಕ್ಷತೆಯ ನಿಯಮಗಳು ಉಪಯೋಗವಿಲ್ಲದವು ಎನ್ನುವ ಭಾವನೆ ಸಾಮಾನ್ಯವಾಗಿದೆ. ರಸ್ತೆ ಸುರಕ್ಷತೆಯ ನಿಯಮಗಳು/ ಸಂಚಾರ ನಿಯಮಗಳು ನಮ್ಮ, ಬೇರೆಯವರ ಹಾಗೂ ವನ್ಯ ಸಂಕುಲಗಳ ಅಮೂಲ್ಯವಾದ ಜೀವ ಉಳಿಸುವ ಜೀವರಕ್ಷಕ ಸಾಧನಗಳು ಎನ್ನುವ ಮನೋಭಾವ, ಸಂವೇದನೆಯನ್ನು ಬೆಳೆಸಿಕೊಂಡು ಉತ್ತಮ ನಾಗರಿಕರಾಗಬೇಕಿದೆ. ನಿಯಮಗಳನ್ನು ಕಡ್ಡಾಯಗೊಳಿಸುವುದರಿಂದ, ಮತ್ತಷ್ಟು ಹೆಚ್ಚಿಸುವುದರಿಂದ ರಸ್ತೆ ನಿಯಮಗಳನ್ನು ಪಾಲಿಸುವಂತೆ ಮಾಡುವುದು ಕಷ್ಟ ಸಾಧ್ಯ.
ವ್ಯಕ್ತಿಗಳ ಮನೋಭಾವ ಬದಲಾವಣೆಯಿಂದ ಮಾತ್ರ ನಿಯಮ ಪಾಲನೆ ಸಾಧ್ಯ. ಮನೋಭಾವ ಬದಲಾವಣೆಗೆ ಸರಿಯಾದ ಸಮಯ ಎಳೆಯ ವಯಸ್ಸು!
ರಸ್ತೆ ಸಂಕೇತಗಳು, ಚಿಹ್ನೆಗಳು, ಸಂಚಾರ ದೀಪಗಳು ಮತ್ತು ಅವುಗಳ ಪಾತ್ರ
ರಸ್ತೆ ಚಿಹ್ನೆಗಳು
ರಸ್ತೆ ಚಿಹ್ನೆಗಳು ಸಾಮಾನ್ಯವಾಗಿ ರಸ್ತೆಯ ಎಡ ಭಾಗದಲ್ಲಿ ಅಥವಾ ಸೆಂಟರ್ ಮೀಡಿಯನ್ಗಳ ಮಧ್ಯೆ ಹಾಕಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಗೂ ಮುಖ್ಯರಸ್ತೆಗಳಲ್ಲಿ ಬಹಳ ದೂರದಿಂದಲೇ ಕಾಣುವಂತೆ ಸೂಚನೆಗಳನ್ನು ರಸ್ತೆಯ ಮೇಲ್ಭಾಗದಲ್ಲಿ ಅಳವಡಿಸಲಾಗಿರುತ್ತದೆ.
ಚಿಹ್ನೆಗಳ ಆಕಾರ ಮತ್ತು ಬಣ್ಣ
ಚಿಹ್ನೆಗಳ ವಿವಿಧ ಆಕಾರ ಮತ್ತು ವಿವಿಧ ಬಣ್ಣಗಳು ವಿಭಿನ್ನ ಅರ್ಥವನ್ನು ಕೊಡುತ್ತವೆ. ಏಕರೂಪದ ಅರ್ಥವನ್ನು ಕೊಡುವ ಚಿಹ್ನೆಗಳನ್ನು ಆಕಾರ ಮತ್ತು ಬಣ್ಣದ ಆಧಾರವಾಗಿ ವರ್ಗೀಕರಿಸಿರುವುದು ಅವುಗಳನ್ನು ನೋಡಿದಾಕ್ಷಣ ಏನನ್ನು ಸೂಚಿಸುತ್ತದೆಂದು ಅನಕ್ಷರಸ್ಥರೂ ಸಹ ತಿಳಿದುಕೊಳ್ಳಲು ಹೆಚ್ಚು ಸಹಾಯಕ.
ಉದಾಹರಣೆಗೆ ;
ನಿಲ್ಲಿ 'ನಿಲ್ಲಿ' ಎಂದು ಸೂಚನೆ ನೀಡುವ ಅಷ್ಟಭುಜ ಕೆಂಪು ಹಿನ್ನೆಲೆಯನ್ನು ಹೊಂದಿದ್ದು ಬಿಳಿ ಬಣ್ಣದ ಅಂಚನ್ನು ಹೊಂದಿರುತ್ತದೆ.
ದಾರಿಕೊಡಿ
'ದಾರಿಕೊಡಿ' ಎಂದು ಸೂಚನೆ ನೀಡುವ ತಲೆಕೆಳಗಾದ ತ್ರಿಭುಜ ಅಥವಾ ದಿಕ್ಕು ನಿರ್ದೆಶಿಸುವ ಚಿಹ್ನೆಗಳು ಆಯಾತಾಕೃತಿ/ಚೌಕ/ಉದ್ದನೆಯ ಪಂಚಭುಜಾಕೃತಿ ಆಕಾರ ಹೊಂದಿರುತ್ತದೆ. ಇವು ಕೆಂಪು ಬಣ್ಣದ ಅಂಚನ್ನು ಹೊಂದಿರುತ್ತದೆ.
ರಸ್ತೆ ಚಿಹ್ನೆಗಳು
ರಸ್ತೆ ಚಿಹ್ನೆಗಳನ್ನು ಈ ಕೆಳಕಂಡಂತೆ 3 ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳನ್ನು ಒಂದೊಂದಾಗಿ ಗಮನಿಸೋಣ.
1. ಕಡ್ಡಾಯವಾಗಿ ಪಾಲಿಸಲೇಬೇಕಾದ ಚಿಹ್ನೆಗಳು
ನೀಲಿ ವೃತ್ತದ ಚಿಹ್ನೆಗಳು ಸಕಾರಾತ್ಮಕ ಆದೇಶವಾಗಿದ್ದು, ಮೋಟಾರು ವಾಹನ ಚಾಲಕರು ಮತ್ತು ಸವಾರರು ವಾಹನ ಚಾಲನೆ ಮಾಡುವಾಗ ಕಡ್ಡಾಯವಾಗಿ ಪಾಲಿಸಲೇಬೇಕಾದ ನಿಯಮಗಳಾಗಿರುತ್ತವೆ.
ವಾಹನ ನಿಲುಗಡೆ ನಿರ್ಬಂಧ ಚಿಹ್ನೆ
ವಾಹನ ಚಾಲಕರು ತಮ್ಮ ವಾಹನಗಳನ್ನು ಇತರೆ ರಸ್ತೆ ಬಳಕೆದಾರರಿಗೆ ಅನಾನುಕೂಲವಾಗುವಂತೆ/ ಅಪಾಯವಾಗದಂತೆ ನಿಲುಗಡೆ ಮಾಡದೆ ಎಚ್ಚರಿಕೆ ವಹಿಸಬೇಕು. ಈ ಬೋರ್ಡ್‍ಗಳಿದ್ದಲ್ಲಿ ನಿಲುಗಡೆ ನಿಷೇಧವಿದ್ದಂತೆ.
ಹಾರ್ನ್‍ಗಳ ನಿರ್ಬಂಧನೆ
ಈ ಸೂಚನೆಯು ವಾಹನ ಚಾಲಕರು ನಿರ್ದಿಷ್ಟ ಕಾರ್ಯವಿಲ್ಲದೆ ಒಂದೇ ಸಮನೆ ಅಥವಾ ಅಗತ್ಯಕ್ಕಿಂತ ಹೆಚ್ಚಾಗಿ ಹಾರ್ನ್ ಬಳಸುವುದನ್ನು ನಿರ್ಬಂಧಿಸುತ್ತದೆ.
ವೇಗ ನಿರ್ಬಂಧನೆ ಚಿಹ್ನೆ
ಕೆಂಪು ವೃತ್ತಚಿಹ್ನೆಯು ಗರಿಷ್ಠ ಮಟ್ಟದ ವೇಗಮಿತಿಯನ್ನು ಸೂಚಿಸಿದರೆ, ನೀಲಿವೃತ್ತದಲ್ಲಿರುವ ಚಿಹ್ನೆಯು ಕನಿಷ್ಠ ವೇಗದ ಸೂಚಕವಾಗಿದೆ. ಎಲ್ಲಾ ವಾಹನಗಳೂ ಸುಗಮವಾಗಿ ಸಾಗಲು ಈ ವೇಗದಲ್ಲೇ ಸಾಗಬೇಕು.
No comments:
Post a Comment