ಲೆಕ್ಕಪತ್ರಗಳನ್ನು ಇಟ್ಟುಕೊಂಡು ಬರುವುದು ಮತ್ತು ವೆಚ್ಚದ ಮೇಲೆ ನಿರ್ಬಂಧ.

inyatrust.in | Thursday, November 24, 2022

(1)  ಗ್ರಾಮ ಪಂಚಾಯತಿಯು  ಆದಾಯ  ಮತ್ತು  ವೆಚ್ಚದ  ಲೆಕ್ಕಪತ್ರಗಳನ್ನು  ಗೊತ್ತುಪಡಿಸಬಹುದಾದಂಥ  ನಿಯಮಗಳಿಗನುಸಾರ ಇಡತಕ್ಕದ್ದು.   
(2) ಗ್ರಾಮ  ಪಂಚಾಯತಿ  ನಿಧಿಯಿಂದ,  ಈ  ಅಧಿನಿಯಮದಲ್ಲಿ  ಸ್ಪಷ್ಟವಾಗಿ  ಅನ್ಯಥಾ  ಉಪಬಂಧಿಸಿರುವಂತೆ ಹೊರತು,  ಗೊತ್ತುಪಡಿಸಬಹುದಾದಂಥ  ಮಂಜೂರಾತಿಗಳಿಗೆ,  ಷರತ್ತುಗಳಿಗೆ  ಮತ್ತು  ಪರಿಮಿತಿಗಳಿಗೊಳಪಟ್ಟು ವೆಚ್ಚಗಳನ್ನು ವಹಿಸತಕ್ಕದ್ದು.   
(3)  ಗ್ರಾಮ  ಪಂಚಾಯತಿಯು,  ಆರ್ಥಿಕ  ವರ್ಷವು  ಮುಕ್ತಾಯವಾದ  ತರುವಾಯ  ನಡೆಸಿದ  ಮೊದಲನೇ ಸಾಮಾನ್ಯ ಸಭೆಯಲ್ಲಿ ಆ ವರ್ಷದ ಲೆಕ್ಕಪತ್ರಗಳನ್ನು ಅಂಗೀಕರಿಸತಕ್ಕದ್ದು.   
244.    ಲೆಕ್ಕಪತ್ರಗಳ  ರವಾನೆ.  ಗ್ರಾಮ  ಪಂಚಾಯತಿಯು,  ವಾರ್ಷಿಕ  ಲೆಕ್ಕಪತ್ರಗಳನ್ನು,  ಅದು  ಅಂತಿಮವಾಗಿ ಅಂಗೀಕರಿಸಿದ  ತರುವಾಯ  ಸಾಧ್ಯವಾದಷ್ಟು  ಬೇಗನೆ  ಗೊತ್ತುಪಡಿಸಿರುವ  ನಮೂನೆಯಲ್ಲಿ  ಲೆಕ್ಕವನ್ನು  ಜಿಲ್ಲಾ ಪಂಚಾಯತಿಗೆ  ಕಳುಹಿಸತಕ್ಕದ್ದು  ಮತ್ತು  ಜಿಲ್ಲಾ  ಪಂಚಾಯತಿಯು  ಕಾಲಕಾಲಕ್ಕೆ  ನಿರ್ದೆಶಿಸಬಹುದಾದಂಥ  ಅದಕ್ಕೆ ಸಂಬಂಧಪಟ್ಟ ವಿವರಗಳು ಮತ್ತು ವೋಚರುಗಳನ್ನು ಒದಗಿಸತಕ್ಕದ್ದು.   
245.  ವಸೂಲಾಗದ  ಮೊತ್ತಗಳನ್ನು  ವಜಾ  ಮಾಡಲು  ಅಧಿಕಾರ.  ಗೊತ್ತುಪಡಿಸಬಹುದಾದ ನಿರ್ಬಂಧಗಳಿಗೊಳಪಟ್ಟು, ಗ್ರಾಮ ಪಂಚಾಯತಿಯು, ಕರಾರಿನ ಮೇಲೆ ಆಗಲಿ ಅಥವಾ ಅನ್ಯಥಾ ಆಗಲಿ, ಅದಕ್ಕೆ ಬಾಕಿ ಬರಬೇಕಾಗಿರುವ  ಯಾವುದೇ  ತೆರಿಗೆಯನ್ನು,  ಫೀಜನ್ನು,  ದರವನ್ನು  ಅಥವಾ  ಇತರ  ಮೊತ್ತವನ್ನು  ಅಥವಾ  ಅದಕ್ಕೆ ಸಂಬಂಧಿಸಿದಂತೆ  ಸಂದಾಯವಾಗತಕ್ಕ  ಯಾವುದೇ  ಮೊಬಲಗನ್ನು,  ಅಂಥ  ತೆರಿಗೆ,  ಫೀಜು,  ದರ  ಅಥವಾ  ಇತರ ಮೊಬಲಗು ವಸೂಲಾಗದ್ದೆಂದು ಅದು ಅಭಿಪ್ರಾಯಪಟ್ಟರೆ ವಜಾ ಮಾಡಬಹುದು:   ಪರಂತು,  ತಾಲ್ಲೂಕು  ಪಂಚಾಯತಿಯ  ಪೂರ್ವಾನುಮೋದನೆಯಿಲ್ಲದೆಯೇ  ಒಂದು  ಸಾವಿರ  ರೂಪಾಯಿಗಳನ್ನು ವಿೂರಿದ ಮೊತ್ತವನ್ನು ವಜಾ ಮಾಡತಕ್ಕದ್ದಲ್ಲ.   
246.    ಲೆಕ್ಕಪತ್ರಗಳ  ಪರಿಶೋಧನೆ.  (1)  ಪ್ರತಿಯೊಂದು  ಗ್ರಾಮ  ಪಂಚಾಯತಿಯ  ಲೆಕ್ಕಪತ್ರಗಳನ್ನು  ಪ್ರತಿವರ್ಷ, 2[ಪ್ರಧಾನ  ನಿರ್ದೇಶಕರು,  ಕರ್ನಾಟಕ  ರಾಜ್ಯ  ಲೆಕ್ಕಪತ್ರಗಳು  ಮತ್ತು  ಲೆಕ್ಕಪರಿಶೋಧನೆ  ಇಲಾಖೆ]2  ಅಧಿಕಾರ ನೀಡಿರುವಂಥ  ಅಧಿಕಾರಿಯು (ಇದರಲ್ಲಿ ಇನ್ನು ಮುಂದೆ ಲೆಕ್ಕಪರಿಶೋಧಕ  ಎಂದು ಕರೆಯಲಾಗಿದೆ) 1[ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ (ಕರ್ತವ್ಯಗಳು, ಅಧಿಕಾರಗಳು ಮತ್ತು ಸೇವಾ ಷರತ್ತುಗಳು) ಅಧಿನಿಯಮ, 1971ರ (1971ರ  ಕೇಂದ್ರ  ಅಧಿನಿಯಮ  56)  ಉಪಬಂಧಗಳಿಗನುಸಾರವಾಗಿ  (1)ನೇ  ಉಪ  ಪ್ರಕರಣದ  ಅಡಿಯಲ್ಲಿ ಲೆಕ್ಕಪರಿಶೋಧನೆಗೆ  ತಾಂತ್ರಿಕ  ಮಾರ್ಗದರ್ಶನ  ಮತ್ತು  ಮೇಲ್ವಿಚಾರಣೆಯನ್ನು  ನಿಯಂತ್ರಕರು  ಮತ್ತು  ಮಹಾಲೆಕ್ಕ ಪರಿಶೋಧಕರವರು ಒದಗಿಸತಕ್ಕದ್ದು ಮತ್ತು ಗ್ರಾಮ ಪಂಚಾಯತಿಗಳ ಲೆಕ್ಕಗಳ ಪರೀಕ್ಷಾರ್ಥ ತಪಾಸಣೆ ಮಾಡತಕ್ಕದ್ದು]1 ಲೆಕ್ಕ ಪರಿಶೋಧನೆ ಮಾಡತಕ್ಕದ್ದು.   
(2) ಲೆಕ್ಕಪರಿಶೋಧನೆಯ ಉದ್ದೇಶಕ್ಕಾಗಿ, ಲೆಕ್ಕಪರಿಶೋಧಕನಿಗೆ ಗ್ರಾಮ ಪಂಚಾಯತಿಯ ಲೆಕ್ಕಪತ್ರಗಳನ್ನು ಮತ್ತು ಇತರ ದಾಖಲೆಗಳನ್ನು ನೋಡಲು ಅವಕಾಶ ಇರತಕ್ಕದ್ದು.   
(3)  ಲೆಕ್ಕಪರಿಶೋಧಕನು,     
(ಎ)  ಲೆಕ್ಕಪರಿಶೋಧನೆಯನ್ನು  ಸರಿಯಾಗಿ  ನಡೆಸುವುದಕ್ಕಾಗಿ  ಅವಶ್ಯವೆಂದು  ತಾನು  ಪರಿಗಣಿಸುವಂಥ ವೋಚರುಗಳನ್ನು, ವಿವರ ಪತ್ರಗಳನ್ನು, ವಿವರಣಾ ಪಟ್ಟಿಗಳನ್ನು, ಪತ್ರ ವ್ಯವಹಾರವನ್ನು, ಟಿಪ್ಪಣಿಗಳನ್ನು ಅಥವಾ ಇತರ ದಸ್ತಾವೇಜುಗಳನ್ನು ತನ್ನ ಮುಂದೆ  ಹಾಜರುಪಡಿಸುವಂತೆ ಬರಹದಲ್ಲಿ ಅಗತ್ಯಪಡಿಸಬಹುದು.     
(ಬಿ)  ಯಾವುವೇ ಅಂಥ ವೋಚರುಗಳ, ವಿವರ ಪತ್ರಗಳ, ವಿವರಪಟ್ಟಿಕೆಗಳ, ಪತ್ರವ್ಯವಹಾರದ, ಟಿಪ್ಪಣಿಗಳ ಅಥವಾ  ದಸ್ತಾವೇಜುಗಳ  ಬಗ್ಗೆ  ಜವಾಬ್ದಾರನಾಗಿರುವ  ಅಥವಾ  ಅವುಗಳ  ಸುಪರ್ದು  ಅಥವಾ  ನಿಯಂತ್ರಣವನ್ನು ಹೊಂದಿರುವ  ಯಾವನೇ  ವ್ಯಕ್ತಿಯನ್ನು  ಅಥವಾ  ಗ್ರಾಮ  ಪಂಚಾಯತಿಯೊಂದಿಗೆ  ಅಥವಾ  ಅದರ  ಅಡಿಯಲ್ಲಿ ಯಾವುದೇ ಕರಾರಿನಲ್ಲಿ ಪ್ರತ್ಯಕ್ಷವಾಗಿ ಅಥವಾ ತಾನಾಗಿಯೇ ಪರೋಕ್ಷವಾಗಿ ಅಥವಾ ಅವನ ಪಾಲುದಾರನ ಮೂಲಕ ಯಾವುದೇ  ಪಾಲು  ಅಥವಾ  ಹಿತಾಸಕ್ತಿಯನ್ನು  ಹೊಂದಿರುವ  ಯಾವನೇ  ವ್ಯಕ್ತಿಯನ್ನು  ತನ್ನ  ಮುಂದೆ  ಖುದ್ದಾಗಿ ಹಾಜರಾಗುವಂತೆ ಬರಹದಲ್ಲಿ ಅಗತ್ಯಪಡಿಸಬಹುದು;     
(ಸಿ)  ತನ್ನ ಮುಂದೆ ಹಾಗೆ ಹಾಜರಾಗುವ ವ್ಯಕ್ತಿಯನ್ನು, ಅಂಥ ವೋಚರುಗಳಿಗೆ, ವಿವರಪತ್ರಗಳಿಗೆ, ವಿವರ ಪಟ್ಟಿಕೆಗಳಿಗೆ,  ಪತ್ರ  ವ್ಯವಹಾರದ,  ಟಿಪ್ಪಣಿಗಳಿಗೆ  ಅಥವಾ  ದಸ್ತಾವೇಜುಗಳಿಗೆ  ಸಂಬಂಧಿಸಿದಂತೆ  ಘೋಷಣೆಯನ್ನು ಮಾಡಲು  ಮತ್ತು  ಅದಕ್ಕೆ  ರುಜು  ಮಾಡಲು  ಅಥವಾ  ಯಾವುದೇ  ಪ್ರಶ್ನೆಗೆ  ಉತ್ತರಿಸಲು  ಅಥವಾ  ಯಾವುದೇ ವಿವರಪತ್ರವನ್ನು ಸಿದ್ಧಪಡಿಸಲು ಮತ್ತು ಒದಗಿಸಲು ಅಗತ್ಯಪಡಿಸಬಹುದು;      
(ಡಿ)  ಗ್ರಾಮ  ಪಂಚಾಯತಿಯ  ಅಧ್ಯಕ್ಷನಿಂದ  ಅಥವಾ  ಸದಸ್ಯನಿಂದ  ಬರಹದಲ್ಲಿ  ವಿವರಣೆಯನ್ನು ಅಗತ್ಯಪಡಿಸಿದ  ಸಂದರ್ಭದಲ್ಲಿ  ಅವನನ್ನು  ಭೇಟಿಯಾಗಲು  ಅಂಥ  ವ್ಯಕ್ತಿಯನ್ನು  ಆಹ್ವಾನಿಸಬಹುದು  ಮತ್ತು  ಅವನ ವಿವರಣೆಯು ಅಗತ್ಯವಾಗಿರುವಂಥ ಅಂಶವನ್ನು ಬರಹದಲ್ಲಿ ನಿರ್ದಿಷ್ಟಪಡಿಸತಕ್ಕದ್ದು.   (4) (3)ನೇ  ಉಪ  ಪ್ರಕರಣದ  ಅಡಿಯಲ್ಲಿ  ಕಾನೂನು  ಸಮ್ಮತವಾಗಿ  ಮಾಡಿದ  ಯಾವುದೇ  ಕಡ್ಡಾಯ ಕೋರಿಕೆಯನ್ನು  ಪಾಲಿಸಲು  ಉದ್ದೇಶಪೂರ್ವಕವಾಗಿ  ನಿರ್ಲಕ್ಷಿಸುವ  ಅಥವಾ  ನಿರಾಕರಿಸುವ  ಯಾವನೇ  ವ್ಯಕ್ತಿಯು, ಅಪರಾಧ  ನಿರ್ಣಯವಾದ  ಮೇಲೆ  ಒಂದುನೂರು  ರೂಪಾಯಿಗಳವರೆಗೆ  ವಿಸ್ತರಿಸಬಹುದಾದ  ಜುಲ್ಮಾನೆಯೊಂದಿಗೆ ದಂಡಿತನಾಗತಕ್ಕದ್ದು:   ಪರಂತು,  ಈ  ಉಪ  ಪ್ರಕರಣದ  ಅಡಿಯಲ್ಲಿ  ಮುಖ್ಯ  ಕಾರ್ಯನಿರ್ವಾಹಕ  ಅಧಿಕಾರಿಯ  ಮಂಜೂರಾತಿ  ಇಲ್ಲದೆ ಯಾವುವೇ ವ್ಯವಹರಣೆಗಳನ್ನು ಮಾಡತಕ್ಕದ್ದಲ್ಲ.   
(5)  ಲೆಕ್ಕ  ಪರಿಶೋಧಕನು,  ಲೆಕ್ಕ  ಪರಿಶೋಧನೆಯು  ಮುಕ್ತಾಯವಾದ  ಒಂದು  ತಿಂಗಳೊಳಗೆ  ಲೆಕ್ಕ ಪರಿಶೋಧನೆಯ  ವರದಿಯ  ಒಂದು  ಪ್ರತಿಯನ್ನು  ಗ್ರಾಮ  ಪಂಚಾಯತಿಗೆ  ಮತ್ತು  ಕಾರ್ಯನಿರ್ವಾಹಕ  ಅಧಿಕಾರಿಗೆ ಕಳುಹಿಸಿಕೊಡತಕ್ಕದ್ದು.   
(6) ಲೆಕ್ಕ  ಪರಿಶೋಧನಾ  ವರದಿಯು  ತಲುಪಿದ  ತರುವಾಯ  ಗ್ರಾಮ  ಪಂಚಾಯತಿಯು,  ವರದಿಯಲ್ಲಿ  ಎತ್ತಿ ತೋರಿಸಿರುವ  ಯಾವುವೇ  ದೋಷಗಳನ್ನು  ಅಥವಾ  ಅಕ್ರಮಗಳನ್ನು  ಸರಿಪಡಿಸಿಕೊಳ್ಳತಕ್ಕದ್ದು  ಮತ್ತು  ಹಾಗೆ  ಮಾಡಿದ ಬಗ್ಗೆ  ಮಾಹಿತಿಯನ್ನು  ಮೂರು  ತಿಂಗಳುಗಳೊಳಗೆ  ಕಾರ್ಯ  ನಿರ್ವಾಹಕ  ಅಧಿಕಾರಿಗೆ  ಕಳುಹಿಸಿಕೊಡತಕ್ಕದ್ದು  ಅಥವಾ ಅಂಥ ದೋಷಗಳಿಗೆ ಅಥವಾ ಅಕ್ರಮಗಳಿಗೆ ಸಂಬಂಧಪಟ್ಟಂತೆ  ಯಾವುದೇ  ಹೆಚ್ಚಿನ ವಿವರಣೆಯನ್ನು  ಅದನ್ನು  ಅದೇ ಅವಧಿಯೊಳಗಾಗಿ ಕಾರ್ಯನಿರ್ವಾಹಕ ಅಧಿಕಾರಿಗೆ ಒದಗಿಸತಕ್ಕದ್ದು.   
(7)  ಲೆಕ್ಕ  ಪರಿಶೋಧನಾ  ವರದಿಯಲ್ಲಿ  ಚರ್ಚಿಸಿರುವ  ಎಲ್ಲ  ಅಥವಾ  ಯಾವುವೇ  ವಿಷಯಗಳಿಗೆ  ಸಂಬಂಧಿಸಿದ ಅಂಥ  ಮಾಹಿತಿಯನ್ನು  ಅಥವಾ  ವಿವರಣೆಯನ್ನು  ಸ್ವೀಕರಿಸಿದ  ಮೇಲೆ,  ಕಾರ್ಯನಿರ್ವಾಹಕ  ಅಧಿಕಾರಿಯು  ಲೆಕ್ಕ ಪರಿಶೋಧಕನೊಂದಿಗೆ ಸಮಾಲೋಚಿಸಿ,     
(ಎ)  ಗ್ರಾಮ  ಪಂಚಾಯತಿಯು  ನೀಡಿದ  ಮಾಹಿತಿಯನ್ನು  ಅಥವಾ  ವಿವರಣೆಯನ್ನು  ಒಪ್ಪಿಕೊಳ್ಳಬಹುದು ಮತ್ತು ಆಕ್ಷೇಪಣೆಗಳನ್ನು ಹಿಂತೆಗೆದುಕೊಳ್ಳಲು ಆದೇಶಿಸಬಹುದು, ಅಥವಾ     (ಬಿ)  ಮುಂದಿನ  ಲೆಕ್ಕ  ಪರಿಶೋಧನೆಯಲ್ಲಿ  ಅಥವಾ  ಅದಕ್ಕಿಂತ  ಮೊದಲಿನ  ಯಾವುದೇ  ದಿನಾಂಕದಲ್ಲಿ ಪುನಃ ತಪಾಸಣೆ ಮಾಡಬೇಕೆಂದು ನಿರ್ದೆಶಿಸಬಹುದು, ಅಥವಾ     
(ಸಿ)  ಲೆಕ್ಕ ಪರಿಶೋಧನಾ ವರದಿಯಲ್ಲಿ ಎತ್ತಿ ತೋರಿಸಿರುವ ಎಲ್ಲ ದೋಷಗಳನ್ನು ಅಥವಾ ಅಕ್ರಮಗಳನ್ನು ಅಥವಾ  ಅವುಗಳಲ್ಲಿ  ಯಾವುವನ್ನಾದರೂ  ಗ್ರಾಮ  ಪಂಚಾಯತಿಯು  ತೆಗೆದುಹಾಕತಕ್ಕದ್ದೆಂದು  ಅಥವಾ ಸರಿಪಡಿಸತಕ್ಕದೆಂದು ನಿರ್ದೆಶಿಸಬಹುದು.
  (8)  ಕಾರ್ಯನಿರ್ವಾಹಕ  ಅಧಿಕಾರಿಯು,  ಅವಶ್ಯವೆಂದು  ತಾನು  ಪರಿಗಣಿಸಬಹುದಾದಂಥ  ವಿಚಾರಣೆಯನ್ನು ನಡೆಸಿದ  ತರುವಾಯ,  ಕಾನೂನಿಗೆ  ವಿರುದ್ಧವಾದುದೆಂದು  ತನಗೆ  ಕಂಡುಬಂದ  ಯಾವುದೇ  ವೆಚ್ಚದ  ಬಗ್ಗೆ  ಅನುಮತಿ ನೀಡದಿರಬಹುದು ಮತ್ತು ಕಾನೂನುಬಾಹಿರ ಸಂದಾಯವನ್ನು ಮಾಡುವ ಅಥವಾ ಮಾಡುವುದಕ್ಕೆ ಅಧಿಕಾರ ನೀಡುವ ವ್ಯಕ್ತಿಯ  ಮೇಲೆ  ಮೊಬಲಗಿನ  ಋಣಭಾರ  ಹೊರಿಸಬಹುದು  ಮತ್ತು  ಸಂಬಂಧಪಟ್ಟ  ವ್ಯಕ್ತಿಯಿಂದ  ವಿವರಣೆಯನ್ನು ಪಡೆದುಕೊಂಡ ತರುವಾಯ ಕಾರ್ಯನಿರ್ವಾಹಕ ಅಧಿಕಾರಿಯು ಅಂಥ ವ್ಯಕ್ತಿಯು ಋಣಭಾರದ ಮೊಬಲಗನ್ನು ಅದು ಬಾಕಿಯಾದ  ದಿನಾಂಕದಿಂದ  ಬಾಕಿ  ಮೊಬಲಗಿನ  ಮೇಲಿನ  ಶೇಕಡಾ  ಹದಿನೈದರಷ್ಟು  ಬಡ್ಡಿ  ಸಹಿತ  ಗ್ರಾಮ ಪಂಚಾಯತಿಗೆ  ಸಂದಾಯ  ಮಾಡತಕ್ಕದ್ದೆಂದು  ಬರಹದಲ್ಲಿ  ಆದೇಶದ  ಮೂಲಕ  ನಿರ್ದೆಶಿಸಬಹುದು  ಮತ್ತು  ಅಂಥ ಆದೇಶದ  ದಿನಾಂಕದಿಂದ  ಎರಡು  ತಿಂಗಳೊಳಗೆ  ಆ  ಮೊಬಲಗನ್ನು  ಸಂದಾಯ  ಮಾಡದಿದ್ದರೆ,  ಕಾರ್ಯನಿರ್ವಾಹಕ ಅಧಿಕಾರಿಯು  ಅದನ್ನು  ಭೂ  ಕಂದಾಯದ  ಬಾಕಿಯಂತೆ  ವಸೂಲ್ಮಾಡಲು  ಕ್ರಮ  ತೆಗೆದುಕೊಳ್ಳತಕ್ಕದ್ದು  ಮತ್ತು  ಅದನ್ನು ಗ್ರಾಮ ಪಂಚಾಯತಿಯ ನಿಧಿಗೆ ಜಮಾ ಮಾಡತಕ್ಕದ್ದು.   
(9) (8)ನೇ  ಉಪಪ್ರಕರಣದ  ಅಡಿಯ,  ಕಾರ್ಯನಿರ್ವಾಶಹಕ  ಅಧಿಕಾರಿಯ  ಆದೇಶದಿಂದ  ಬಾಧಿತನಾದ ಯಾವನೇ  ವ್ಯಕ್ತಿಯು,  ತೀರ್ಮಾನದ  ಪ್ರತಿಯು  ಅವನಿಗೆ  ತಲುಪಿದ  ಹದಿನೈದು  ದಿನಗಳೊಳಗೆ, ಮುಖ್ಯಕಾರ್ಯನಿರ್ವಾಹಕ  ಅಧಿಕಾರಿಗೆ  ಅಪೀಲನ್ನು  ಸಲ್ಲಿಸಬಹುದು,  ಅವರು  ಸೂಕ್ತವೆಂದು  ತಾವು ಭಾವಿಸಬಹುದಾದಂಥ ಆದೇಶವನ್ನು ನೀಡತಕ್ಕದ್ದು.    
(10) 1993ರ  ಕರ್ನಾಟಕ  ಪಂಚಾಯತ್  ರಾಜ್  ಅಧಿನಿಯಮದ  ಪ್ರಾರಂಭದ  ದಿನಾಂಕದಂದು  ಸರ್ಕಾರದ ಮುಂದೆ  ಇತ್ಯರ್ಥದಲ್ಲಿರುವ  (9)ನೇ  ಉಪ  ಪ್ರಕರಣದ  ಅಡಿಯ  ಯಾವುದೇ  ಅಪೀಲು  ಮುಖ್ಯ  ಕಾರ್ಯನಿರ್ವಾಹಕ ಅಧಿಕಾರಿಗೆ  ವರ್ಗಾಯಿಸಲ್ಪಡತಕ್ಕದ್ದು  ಮತ್ತು  ಅಂಥ  ಅಪೀಲನ್ನು,  ಅದನ್ನು  ಅವರ  ಮುಂದೆ  ದಾಖಲ್ಮಾಡಲಾಗಿದ್ದರೆ ಹೇಗೋ ಹಾಗೆ ತೀರ್ಮಾನಿಸತಕ್ಕದ್ದು.
(11)  2[ಪ್ರಧಾನ  ನಿರ್ದೇಶಕರು,  ಕರ್ನಾಟಕ  ರಾಜ್ಯ  ಲೆಕ್ಕಪತ್ರಗಳು  ಮತ್ತು  ಲೆಕ್ಕಪರಿಶೋಧನೆ  ಇಲಾಖೆ]2ಲೆಕ್ಕ ಪರಿಶೋಧನಾ  ವರದಿಯ  ಬಗ್ಗೆ  ಮಾಡಿದ  ಸಂಕ್ಷಿಪ್ತ  ಅಭಿಪ್ರಾಯೋಕ್ತಿಗಳನ್ನು  ಮತ್ತು  ಗ್ರಾಮ ಪಂಚಾಯತಿಗಳು ಸರಿಪಡಿಸಿರುವುದನ್ನು ಸರ್ಕಾರಕ್ಕೆ ಒಪ್ಪಿಸತಕ್ಕದ್ದು.
  1[(12) 2[ಪ್ರಧಾನ ನಿರ್ದೇಶಕರು, ಕರ್ನಾಟಕ ರಾಜ್ಯ ಲೆಕ್ಕಪತ್ರಗಳು ಮತ್ತು ಲೆಕ್ಕಪರಿಶೋಧನೆ ಇಲಾಖೆ]2, ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ಸಂಬಂಧದಲ್ಲಿ ಕ್ರೋಢಿಕೃತ ವಾರ್ಷಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಮತ್ತು ರಾಜ್ಯ ಸರ್ಕಾರವು ಅಂಥ ವರದಿಯನ್ನು ರಾಜ್ಯ ವಿಧಾನಮಂಡಲದ ಉಭಯಸದನಗಳ ಮುಂದೆ ಮಂಡಿಸತಕ್ಕದ್ದು.]1
1.  2011ರ ಅಧಿನಿಯಮ ಸಂಖ್ಯೆ: 34ರ ಮೂಲಕ ದಿನಾಂಕ: 04-10-2010ರಿಂದ ಸೇರಿಸಲಾಗಿದೆ.
2.  2017ರ ಅಧಿನಿಯಮ ಸಂಖ್ಯೆ 37ರ ಮೂಲಕ ದಿನಾಂಕ 12.07.2017ರಿಂದ ಪ್ರತಿಯೋಜಿಸಲಾಗಿದೆ.

No comments:

Post a Comment