ಸಂಚಾರ ಸುರಕ್ಷತೆಯ ನಿಯಮಗಳ ಪಾಲನೆ

inyatrust.in | Tuesday, November 15, 2022

 
ಸಾರಿಗೆ  ವ್ಯವಸ್ಥೆ  ಯಾವುದೇ  ದೇಶದ  ಅಭಿವೃದ್ಧಿಯಲ್ಲಿ  ಪ್ರಮುಖ  ಪಾತ್ರ  ವಹಿಸುವಂಥದ್ದು.  ಮಾನವನ  ಬದುಕಿನಲ್ಲಿ  ಸೀಮಿತ ಅಗತ್ಯವಾಗಿದ್ದ  ಸಾರಿಗೆ  ವ್ಯವಸ್ಥೆಗೆ  ಕೈಗಾರಿಕೀಕರಣ  ಆರಂಭವಾಗಿ,  ತೀವ್ರಗತಿಯಲ್ಲಿ  ಮುಂದುವರೆದಂತೆ  ಅತ್ಯಂತ  ಮಹತ್ವ ಪ್ರಾಪ್ತಿಯಾಯಿತು.  ಉತ್ಪಾದನೆ  ವೇಗ  ಹೆಚ್ಚಾದಂತೆ  ಉತ್ಪನ್ನಗಳ  ಸರಬರಾಜೂ  ವೇಗವಾಗಿ  ಆಗುವ  ಅಗತ್ಯ  ತಲೆದೋರಿತು. ಇದರಿಂದ  ವಾಹನಗಳಿಗೆ  ಸಂಬಂಧಿಸಿದಂತೆ  ತಾಂತ್ರಿಕ  ಬೆಳವಣಿಗೆಗಳು  ತೀವ್ರವಾಗುತ್ತಾ,  ಸಾರಿಗೆ  ವ್ಯವಸ್ಥೆಗೆ  ಹೆಚ್ಚೆಚ್ಚು  ವೇಗ ದಕ್ಕಿದಂತೆ  ಅಪಘಾತಗಳೂ  ಸಹ  ಹೆಚ್ಚಾಗತೊಡಗಿದವು.  ಅಪಘಾತಗಳ  ಹೆಚ್ಚಳದ  ಜತೆ  ಜತೆಯಲ್ಲೇ  ರಸ್ತೆ  ಸುರಕ್ಷತೆ  ಮತ್ತು ಅಪಘಾತಗಳ  ನಿಯಂತ್ರಣಕ್ಕೆ  ಅನೇಕ  ಕಾನೂನುಗಳು  ಜಾರಿಗೆ  ಬಂದವು.  ಸ್ಥಳೀಯ  ಅನಿವಾರ್ಯತೆ  ಮತ್ತು  ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಕಾಲಕಾಲಕ್ಕೆ ರಸ್ತೆಸುರಕ್ಷತೆಯ ನಿಯಮಗಳು ಬದಲಾವಣೆಯಾಗುತ್ತಿವೆ.  
ರಸ್ತೆ ಅಪಘಾತಕ್ಕೆ ಕಾರಣಗಳು
*  ಕಟ್ಟುನಿಟ್ಟಾದ ನಿಯಮ ಪಾಲನೆಯ ಕೊರತೆ
*  ನುರಿತ ವಾಹನ ಚಾಲಕರ ಕೊರತೆ  
*  ಉತ್ತಮ ಸ್ಥಿತಿಯಲ್ಲಿಲ್ಲದ ರಸ್ತೆಗಳು  
*  ವಾಹನಗಳ ನಿರ್ವಹಣೆಯ ಕೊರತೆ  
*  ಹವಾಮಾನ ವೈಪರೀತ್ಯಗಳು  
*  ಕಾನೂನು ಉಲ್ಲಂಘನೆ  
*  ಇನ್ನಿತರೆ ಕಾರಣಗಳು
 ಅಪಘಾತವಾದ ಸ್ಥಳದಲ್ಲಿ ನಾವು ಹೀಗೆ ಮಾಡೋಣವೇ?
1.  ಅಪಘಾತ ಸ್ಥಳದಲ್ಲಿ ಸಂಚಾರ ಮಾರ್ಪಾಡುಗಳೇನಾದರೂ ಇದ್ದಲ್ಲಿ ಚಾಚೂ ತಪ್ಪದೆ ಅನುಸರಿಸೋಣ.  
2.  ಸಂಚಾರ ಪೊಲೀಸರು ನೀಡಿರುವ ಸೂಚನೆಗಳನ್ನು ಪಾಲಿಸೋಣ.  
3.  ಅಪಘಾತ ಸ್ಥಳಕ್ಕೆ ಧಾವಿಸುವ ಅಥವಾ ಸ್ಥಳದಿಂದ ಹೊರಗೆ ಹೋಗುವ ತುರ್ತು ವಾಹನಗಳು ಮತ್ತು ಪೊಲೀಸ್ ವಾಹನಗಳಿಗೆ ಪ್ರಾಮುಖ್ಯತೆ ಕೊಡೋಣ.  
4.  ನಾವು ಅಪಘಾತದ ಸಾಕ್ಷಿಯಾಗಿದ್ದರೆ ತನಿಖಾಧಿಕಾರಿಗಳಿಗೆ ಸಹಕರಿಸೋಣ. ಅಂತಹವರಿಗೆ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ಕೇಸುಗಳಲ್ಲಿ ಹೊಣೆಗಾರಿಕೆ ಇರುವುದಿಲ್ಲ.  
5.  ಯಾವುದಾದರೂ  ವಾಹನ  ಬೇರೆ  ಯಾರಿಗಾದರೂ  ಡಿಕ್ಕಿ  ಮಾಡಿ  ನಿಲ್ಲಿಸದೇ  ಹೋಗುತ್ತಿದ್ದರೆ  100ಕ್ಕೆ  ಕರೆ  ಮಾಡಿ ಪೊಲೀಸ್ ಕಂಟ್ರೊಲ್ ರೂಂಗೆ ಮಾಹಿತಿ ಕೊಡೋಣ.  
6.  ನಾವೇ ಅಪಘಾತ ಮಾಡಿದ್ದಲ್ಲಿ, ಗಾಯಾಳುಗಳನ್ನು ಮೊದಲು ಆಸ್ಪತ್ರೆಗೆ ಸೇರಿಸುವ ಮತ್ತು ಠಾಣೆಗೆ 24 ಗಂಟೆಯೊಳಗೆ ವಿಷಯ ತಿಳಿಸುವ ಜವಾಬ್ದಾರಿ ನಮ್ಮದೇ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳೋಣ.
ಚಾಲನಾ ಪರವನಾಗಿ
ಕರ್ನಾಟಕದಲ್ಲಿ  ಚಾಲನಾ  ಪರವಾನಗಿಯನ್ನು  ಪಡೆಯಲಿಚ್ಚಿಸುವವರು  ಮೊದಲಿಗೆ  ಕಲಿಯುವವರ  ಪರವಾನಗಿಯನ್ನು ಪಡೆಯಬಹುದಾಗಿದ್ದು,  ನಂತರ  6  ತಿಂಗಳ  ಕಾಲಾವಧಿಯ  ಒಳಗೆ  ಚಾಲನಾ  ಪರವಾನಗಿಯನ್ನು  ಪಡೆಯಬಹುದಾಗಿರುತ್ತದೆ. ಕಲಿಯುವ  ಪರವಾನಗಿಯನ್ನು  ಪಡೆದ  1  ತಿಂಗಳ  ಅವಧಿಯ  ನಂತರ  ಪರವಾನಗಿ  ಪಡೆಯಲು  ಪರೀಕ್ಷೆಗಾಗಿ  ಸಮಯ  ನಿಗದಿ ಮಾಡಲಾಗುತ್ತದೆ.   
ವಾಹನ  ಚಾಲಕರು  ಈ  ಮುಂದಿನ  ದಾಖಲೆಗಳನ್ನು  ತಮ್ಮ  ವಾಹನದೊಂದಿಗೆ  ಸದಾ  ಇಟ್ಟುಕೊಂಡಿರುವುದು  ಅತೀ  ಅಗತ್ಯ.
 ರಸ್ತೆ ಬಳಕೆದಾರರಿಗೆ ಸುರಕ್ಷತೆ ಬಗ್ಗೆ ಸಲಹೆಗಳು
  ವಾಹನ ಚಾಲಕರು/ಸಹ ಪ್ರಯಾಣಿಕರು
*  ದ್ವಿಚಕ್ರ ವಾಹನ ಚಾಲಕರು ಮತ್ತು ಹಿಂಬದಿ ಸವಾರರು ಯಾವಾಗಲೂ ಹೆಲ್ಮೆಟ್ ಧರಿಸಿರಬೇಕು
*  ವಾಹನ ಚಾಲಕರು ಮತ್ತು ಮುಂದಿನ ಆಸನದಲ್ಲಿ ಕುಳಿತುಕೊಳ್ಳುವ ಪ್ರಯಾಣಿಕರು ಸೀಟ್ ಬೆಲ್ಟ್ ಧರಿಸಿರಬೇಕು. ಚಿಕ್ಕ ಮಕ್ಕಳಿಗೆ ಸೀಟ್ ಕ್ರಾಡಲ್ ಬಳಸಿ ಸೀಟ್ ಬೆಲ್ಟ್ ಹಾಕಬೇಕು.   
*  ವಾಹನ ಚಾಲನೆಯಲ್ಲಿರುವಾಗ ಚಾಲಕರನ್ನು ಮಾತನಾಡಿಸಬಾರದು ಮತ್ತು ಚಾಲಕರೂ ಮಾತನಾಡಬಾರದು ಹಾಗೂ ಮೊಬೈಲ್ ಬಳಸಬಾರದು.  
*  12 ವರ್ಷದ ಒಳಗಿನ ಮಕ್ಕಳು ಮುಂದಿನ ಆಸನಗಳಲ್ಲಿ ಕುಳಿತುಕೊಳ್ಳದೆ ಹಿಂಬದಿಯ ಆಸನಗಳಲ್ಲಿಯೇ ಕುಳಿತುಕೊಳ್ಳುವುದು ಒಳಿತು.  
*  ವಾಹನ ನಿಲುಗಡೆ ಮಾಡುವಾಗ ಹಿಂದಿನ ಮತ್ತು ಮುಂದಿನ ವಾಹನಗಳ ನಡವಿನ ಅಂತರ 3 ಅಡಿಗಳಷ್ಟಿರಬೇಕು.  
ರಸ್ತೆ ಸಂಚಾರದ ನೀತಿ ನಿಯಮಗಳು ಮತ್ತು ರಸ್ತೆ ಬಳಕೆದಾರರ ಉತ್ತಮ ವರ್ತನೆಗಳು
ರಸ್ತೆ  ಇರುವುದು  ಎಲ್ಲರ  ಉಪಯೋಗಕ್ಕಾಗಿಯಲ್ಲವೇ
*  ರಸ್ತೆ  ಬಳಕೆ  ಮಾಡುವಾಗ  ನಾವು  ಪಾದಚಾರಿಗಳಾಗಿರಲೀ,  ಸೈಕಲ್ ಸವಾರರಾಗಿರಲೀ,  ವಾಹನ  ಚಾಲಕರಾಗಿರಲೀ/ಸಹ  ಪ್ರಯಾಣಿಕರಾಗಿರಲೀ  ರಸ್ತೆಯ  ಸಹಬಳಕೆದಾರರ  ಬಗ್ಗೆ  ಕಳಕಳಿಯಿಂದ ವರ್ತಿಸಬೇಕು. ರಸ್ತೆಯನ್ನು ಅತ್ಯುತ್ತಮವಾಗಿ ಬಳಸುವ ಸತ್ಪ್ರಜೆಯಾಗಿ ರಸ್ತೆ ಸಂಚಾರದ ನೀತಿ ನಿಯಮಗಳನ್ನು ಅನುಸರಿಸಬೇಕು ಮತ್ತು ನಮ್ಮೊಂದಿಗೆ ರಸ್ತೆಯನ್ನು ಉಪಯೋಗಿಸಿಕೊಳ್ಳುವ ರಸ್ತೆಯ ಸಹಬಳಕೆದಾರರಿಗಿರುವ ಹಕ್ಕನ್ನೂ ಗೌರವಿಸಬೇಕು.

No comments:

Post a Comment